ಕೊಂಬಿನ ಸಾಮಾನುಗಳು	

	ಎಮ್ಮೆ, ದನ ಮುಂತಾದ ಪ್ರಾಣಿಗಳ ಕೊಂಬಿನಿಂದ ನಾಜೂಕಾದ ಸಾಮಾನುಗಳನ್ನು ತಯಾರಿಸುವ ಕಲೆ ಭಾರತದಲ್ಲಿ ಬಹಳ ಹಿಂದಿನಿಂದ ಕೈಕಸಬಾಗಿ ಉಳಿದುಬಂದಿದೆ. ಮುಖ್ಯವಾಗಿ ಗುಜರಾತ್, ರಾಜಸ್ಥಾನ, ಬಿಹಾರ್, ಒರಿಸ್ಸ ಹಾಗೂ ಮೈಸೂರು ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಕುಮಟ, ತಾಲ್ಲೂಕುಗಳಲ್ಲಿಯೂ ಬೆಳಗಾಂವಿ ಜಿಲ್ಲೆಯ ಖಾನಾಪುರದಲ್ಲಿಯೂ ಈ ಕಸಬಿನವರನ್ನು ಇಂದಿಗೂ ಕಾಣಬಹುದು.

	ಮೊದಲು ಡೊಂಬಾರಿ ಜನ ಈ ಸಾಮಾನುಗಳನ್ನು ತಯಾರಿಸುತ್ತಿದ್ದರಾದರೂ ಅವರು ತಯಾರಿಸುತ್ತಿದ್ದ ಸಾಮಾನುಗಳು ಅಷ್ಟು ನಯವಾಗಿಯೂ ಕಲಾತ್ಮಕವಾಗಿಯೂ ಇರುತ್ತಿರಲಿಲ್ಲ. ಈ ಕಲೆಯನ್ನು ಉತ್ತಮಪಡಿಸಬೇಕೆಂಬ ಉದ್ದೇಶದಿಂದ ಹನುಮಂತರಾವ್ ಕೌಜಲಗಿಯವರು ಡೊಂಬಾರಿ ಜನರನ್ನು ಕಲೆ ಹಾಕಿ ಅವರಿಗೆ ಪ್ರೋತ್ಸಾಹ ಕೊಟ್ಟಿದ್ದುಂಟು. ಆದರೆ ಅಲೆಮಾರಿಗಳಾದ ಡೊಂಬಾರಿಗಳು ಒಂದು ಕಡೆ ನೆಲೆನಿಲ್ಲದೆ ಹೊರಟು ಹೋದರಾದ ಕಾರಣ ಕೌಜಲಗಿಯವರ ಉದ್ದೇಶ ನೆರವೇರಲಿಲ್ಲ. ಅನಂತರ ಸು.1938ನೆಯ ವರ್ಷ ಕೌಜಲಗಿಯವರೂ ಎಸ್. ಕೆ. ಕಲ್ಲಾಪುರ ಅವರೂ ಒಂದಾಗಿ ಹೊನ್ನಾವರದಲ್ಲಿ ಒಂದು ತರಬೇತು ಸಂಸ್ಥೆಯನ್ನು ಸ್ಥಾಪಿಸಿದರು. ಇಲ್ಲಿ ತರಬೇತಿ ಕೊಡಲು ನುರಿತ ಶಿಕ್ಷಕರನ್ನು ಬಿಹಾರ, ಒರಿಸ್ಸಗಳಿಂದ ಕರೆಸಲಾಗಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಗೂ 15 ರೂಪಾಯಿ ವಿದ್ಯಾರ್ಥಿವೇತನ ಸಿಗುತ್ತಿತ್ತು. ಈ ಸಂಸ್ಥೆ ಮೂರು ವರ್ಷಗಳವರೆಗೆ ತರಬೇತು ಕೊಟ್ಟು ಸುಮಾರು 30-40 ಜನರನ್ನು ತಯಾರಿಸಿತು. ಇವರಲ್ಲಾರೂ ಈ ಕಸಬನ್ನು ಮಾಡುವವರ ಮನೆತನದವರಾಗಿರಲಿಲ್ಲ ಎಂಬುದು ಗಮನಾರ್ಹವಾದ ವಿಷಯ.

ಚಿತ್ರ

	ಮುಂದೆ 1942ರಲ್ಲಿ ತರಬೇತು ಪಡೆದ 15 ಜನ ಒಂದಾಗಿ ಒಂದು ಸಹಕಾರಿ ಸಂಘವನ್ನು ಸ್ಥಾಪಿಸಿದರು. ಆರು ವರ್ಷಗಳಲ್ಲಿ ಸದಸ್ಯರ ಸಂಖ್ಯೆ 70, 80ರಷ್ಟಾಯಿತು. ಸಂಘ ತಯಾರಿಸಿದ ಸಾಮಾನುಗಳನ್ನು ಬೊಂಬಾಯಿನ ಗೃಹಕೈಗಾರಿಕೆ ಮತ್ತು ಚಿಕ್ಕ ಉದ್ದಿಮೆ ಸಾಮಾನುಗಳ ಮಾರಾಟ ಮಳಿಗೆಯವರು ಕೊಂಡು ಮಾರುತ್ತಿದ್ದರು. ಆಗ ಈ ಸಾಮಾನುಗಳಿಗೆ ಪರದೇಶದ ಜನರ ಬೇಡಿಕೆ ಬಹಳಷ್ಟಿತ್ತು. ಕ್ರಮೇಣ ಆ ಬೇಡಿಕೆ ಕಡಿಮೆಯಾದಂತೆ ಕೊಂಬಿನ ಸಾಮಾನಿನ ತಯಾರಿಕೆ ಹಿಂದೆ ಬಿತ್ತು. ಹಿಂದೆ 10 ರಿಂದ 20 ರೂಪಾಯಿ ಸಂಪಾದನೆ ಪಡೆಯುತ್ತಿದ್ದವರು ಇಂದು ದಿನಕ್ಕೆ 2 ಅಥವಾ 3 ರೂಪಾಯಿ ಸಂಪಾದಿಸಿದರೆ ಹೆಚ್ಚು. ಈಚೆಗೆ ಈ ಕಸಬಿನ ಜನ ದೊಡ್ಡ ಊರುಗಳ ರಸ್ತೆ ಅಂಚಿನಲ್ಲಿ ಕೂತು ನಾಜೂಕಾದ ಕೆಲಸ ಮಾಡಿ ಹೊಟ್ಟೆ ಹೊರೆಯುತ್ತಿದ್ದಾರೆ. ಸದ್ಯಕ್ಕೆ ಹೊನ್ನಾವರದಲ್ಲಿ ಕೇವಲ 5 ಮಂದಿ, ಕುಮಟದಲ್ಲಿ 5 ಮಂದಿ ಈ ಉದ್ಯೋಗವನ್ನು ಮಾಡುತ್ತಿದ್ದಾರೆ.

ಚಿತ್ರ

	ಕೊಂಬಿನಿಂದ ತಯಾರಿಸಿದ ಆಧುನಿಕ ಕಲಾವಸ್ತುಗಳು ಕುಶಲ ಕಲೆಗಳಿಗೆ ಸರ್ಕಾರ ಈಗ ನೀಡುತ್ತಿರುವ ಪ್ರೋತ್ಸಾಹದಿಂದ ಈ ಕಲೆ ಅಭಿವೃದ್ಧಿ ಹೊಂದಬಹುದೆಂಬ ಭರವಸೆ ಕಂಡುಬರುತ್ತಿದೆ.

	ವಸ್ತುಗಳ ತಯಾರಿಕೆಗೆ ಮೊದಲು ಕೊಂಬುಗಳನ್ನು ಸ್ವಚ್ಛಪಡಿಸಿ ಹದಮಾಡಬೇಕಾಗುತ್ತದೆ. ಬಾಚಣಿಕೆ ಮಾಡಬೇಕಾದಾಗ ಪೊಳ್ಳಾದ ಕೊಂಬಿನ ಒಳಭಾಗವನ್ನು ಕಾಯಿಸಿ ಅದನ್ನು ಅಗಲ ಮಾಡಿ ಒತ್ತಡದ ಉಪಕರಣದಲ್ಲಿ 15-20 ನಿಮಿಷಗಳವರೆಗೆ ಇಡುತ್ತಾರೆ. ಅನಂತರ ನೀರಿಗೆ ಹಾಕಿ ಸ್ವಚ್ಛ ಮಾಡುತ್ತಾರೆ. ಆಮೇಲೆ ಅಳತೆಗೆ ತಕ್ಕಂತೆ ಕತ್ತರಿಸಿಕೊಂಡು ಮೇಲ್ಮೈಯನ್ನು ತಿಕ್ಕಿ, ಬಾಚಣಿಕೆಗಳನ್ನು ಮಾಡುತ್ತಾರೆ. ಸಿದ್ಧವಾದ ಬಾಚಣಿಕೆಗಳನ್ನು ಉಪ್ಪು ಕಾಗದದಿಂದ ಉಜ್ಜಿ ಶೃಂಗಕಾಂತ ಮರದ ಎಲೆ ಮತ್ತು ಕರಿಸೀಮೆಸುಣ್ಣದ ಪುಡಿಯಿಂದ ತಿಕ್ಕಿ ನಯ ಮಾಡುತ್ತಾರೆ. ಕೊಂಬಿನಿಂದಾದ ವಸ್ತುಗಳಲ್ಲಿ ಬಾಚಣಿಕೆಗಳು, ಹೂದಾನಿಗಳು, ಪ್ರಾಣಿಪಕ್ಷಿ ನಮೂನೆಗಳು ಬಹು ಜನಪ್ರಿಯವೆನಿಸಿವೆ. ಗೋಡೆಯ ಅಲಂಕಾರಕ್ಕಾಗಿ ಸಿದ್ಧಪಡಿಸಿದ ಜಿಂಕೆ ಮತ್ತು ಕಾಡೆಮ್ಮೆಯ ಕೊಂಬುಗಳ ಮಾರಾಟವೂ ಹಿಂದಿನಿಂದ ಲಾಭದಾಯಕವೆನಿಸಿದೆ.					(ಪಿ.ಪಿ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ